ಸ್ಯಾಲರಿ ಸ್ಲಿಪ್ ಬಗ್ಗೆ ನಿಮಗೆಷ್ಟು ಗೊತ್ತು!

Salary slip ಸ್ಯಾಲರಿ ಸ್ಲಿಪ್:

ನಿಮ್ಮ ಸ್ಯಾಲರಿ ಸಿಪ್ ಬಗ್ಗೆ ತಪ್ಪದೆ ತಿಳಿದುಕೊಳ್ಳಬೇಕಾದ 8 ಅಂಶಗಳು

ಸ್ಯಾಲರಿ ಸ್ಲಿಪ್ ಎನ್ನುವುದು ಉದ್ಯೋಗಿಗಳು ಪ್ರತಿ ತಿಂಗಳು ಸಂಸ್ಥೆಯಿಂದ (ಮಾಲೀಕರಿಂದ) ಸ್ವೀಕರಿಸುವ ದಾಖಲೆಯಾಗಿದೆ. ಈ ಸ್ಲಿಪ್ ಒಟ್ಟು ಸಂಬಳದ ಕುರಿತಾದ ಸಮಗ್ರ ಚಿತ್ರಣವನ್ನು ಹೊಂದಿರುತ್ತದೆ. ಮೂಲ ವೇತನ, ಭತ್ಯೆ, ವೈದ್ಯಕೀಯ ಭತ್ಯೆ, ಪಿಎಫ್ ಮೊತ್ತ, ತೆರಿಗೆ ಕಡಿತ ಇತ್ಯಾದಿ ಅಂಶಗಳನ್ನು ಒಳಗೊಂಡಿರುತ್ತದೆ.

ಇದು ಉದ್ಯೋಗಿಗಳು ಪಡೆಯುವ ಒಟ್ಟು ಸಂಬಳದಲ್ಲಿ ಕಡಿತವಾಗಿ ಎಷ್ಟು ನಿವ್ವಳ ವೇತನ (ಟೇಕ್ ಹೋಮ್) ಪಡೆಯುತ್ತಿರಿ ಎಂಬುದನ್ನು ತೋರಿಸುತ್ತದೆ. ಸ್ಯಾಲರಿ ಸ್ಲಿಪ್ ಪ್ರತಿ ತಿಂಗಳು ಸಂಬಳ ಪಾವತಿಸಿದ ನಂತರ ನಿಮಗೆ ಕಳುಹಿಸಲಾಗುತ್ತದೆ.

ಉದ್ಯೋಗಿಗಳು ಕೆಲಸವನ್ನು/ಸಂಸ್ಥೆಯನ್ನು ಬದಲಾಯಿಸುವಾಗ ಸ್ಯಾಲರಿ ಸ್ಲಿಪ್ ಬಗ್ಗೆ ಸರಿಯಾಗಿ ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ. ಹೀಗಾಗಿ ನಮಗೆ ಗೊತ್ತಿರಲೇಬೇಕಾದ ಕೆಲ ಪ್ರಧಾನ ಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ. ತಪ್ಪದೆ ನೋಡಿ...

1. ಮೂಲ ವೇತನ(ಬೆಸಿಕ್ ಸ್ಯಾಲರಿ)
ಸ್ಯಾಲರಿ ಸ್ಲಿಪ್ ನಲ್ಲಿ ಮೂಲ ವೇತನ ಎನ್ನುವುದು ತುಂಬಾ ಮಹತ್ವಪೂರ್ಣವಾಗಿರುವ ಅಂಶ. ಸಂಬಳದ ಒಟ್ಟು ಮೊತ್ತದಲ್ಲಿ ಅತಿ ಹೆಚ್ಚಿನ ಪ್ರಮಾಣವನ್ನು ಮೂಲ ವೇತನದ ರೂಪದಲ್ಲಿ ಉದ್ಯೋಗಿಗಳು ಪಡೆಯುತ್ತಾರೆ. ಇದು ಕಂಪನಿಯ ನೀತಿ ಹಾಗೂ ವ್ಯಕ್ತಿಗಳ ವೇತನದ ಆಧಾರದ ಮೇಲೆ ಶೇಕಡಾವಾರು ಬದಲಾಗುತ್ತದೆ. ಮೂಲ ವೇತನದ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಉದ್ಯೋಗಿಗಳು ಗಮನಿಸಬೇಕಾಗುತ್ತದೆ.

2. ಗೃಹ ಬಾಡಿಗೆ ಭತ್ಯೆ(HRA)
ಗೃಹ ಬಾಡಿಗೆ ಭತ್ಯೆ ಎನ್ನುವುದು ಮನೆ ಬಾಡಿಗೆಯನ್ನು ಕಟ್ಟಲು ನೀಡಿದ ಪ್ರಯೋಜನವಾಗಿದೆ. ನಗರಗಳಿಗೆ ಅನುಗುಣವಾಗಿ ಶೇಕಡಾವಾರು ಗೃಹ ಬಾಡಿಗೆ ಭತ್ಯೆ(HRA) ಅವಲಂಬಿತವಾಗಿರುತ್ತದೆ. ಮೇಟ್ರೋ ನಲ್ಲಿ ವಾಸಿಸುವವರಾದರೆ ವೇತನದಲ್ಲಿ ಶೇ. 50ರಷ್ಟು ಅಥವಾ ಶೇ. 40ರಷ್ಟು ಸಂಬಳ ಅರ್ಹವಾಗಿರುತ್ತದೆ. ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಚೆನ್ನೈ ಇವು ಮೇಟ್ರೋ ನಗರಗಳಾಗಿವೆ. ಸಂಬಳದ ಭಾಗವಾಗಿ HRA ಭತ್ಯೆ ಪಡೆಯುವ ವ್ಯಕ್ತಿಗಳು ತೆರಿಗೆ ವಿನಾಯಿತಿ ಪಡೆಯುತ್ತಾರೆ.

3. ವಾಹನ ಭತ್ಯೆ
ಸ್ಯಾಲರಿ ಸ್ಲಿಪ್ ಸಂದರ್ಭದಲ್ಲಿ ಈ ಅಂಶವನ್ನು ಸಹ ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಭತ್ಯೆಗಳು ನಿಶ್ಚಿತ ಅವಧಿಯ ಮೊತ್ತವಾಗಿರುತ್ತದೆ. ಸಂಸ್ಥೆಗೆ ಸಂಬಂಧಿಸಿದ ಕೆಲ ಸಭೆ, ವಿಚಾರ ಸಂಕಿರಣಗಳಿಗಾಗಿ ಉದ್ಯೋಗಿ ಹೋದಾಗ ಅವರಿಗೆ ವಾಹನ ಭತ್ಯೆ, ಉಪಾಹಾರ ಭತ್ಯೆ, ಸಮವಸ್ತ್ರ ಭತ್ಯೆ ರೂಪದಲ್ಲಿ ನೀಡಲಾಗುತ್ತದೆ. ಇದು ಸಂಬಳವನ್ನು ಹೊರತುಪಡಿಸಿದ ಮೊತ್ತವಾಗಿರುತ್ತದೆ. ತಿಂಗಳಿಗೆ ರೂ. 1,600 ಹಾಗೂ ವಾರ್ಷಿಕವಾಗಿ 19,200 ಸಾರಿಗೆ ಭತ್ಯೆ ಆದಾಯ ತೆರಿಗೆ ಅಡಿಯಲ್ಲಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ.

4. ವೈದ್ಯಕೀಯ ಭತ್ಯೆ
ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ನೀಡುವ ನಿರ್ಧಿಷ್ಟ ಪ್ರಮಾಣದ ಮೊತ್ತವೇ ವೈದ್ಯಕೀಯ ಭತ್ಯೆ ಆಗಿದೆ. ವೈದ್ಯಕೀಯ ಭತ್ಯೆ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಕಾಲ ಕಾಲಕ್ಕೆ ವೈದ್ಯಕೀಯ ಬಿಲ್ ಗಳನ್ನು ಸಂಸ್ಥೆಗೆ ಸಲ್ಲಿಸಿದರೆ ರೂ. 15,000 ವರೆಗಿನ ಮೊತ್ತಕ್ಕೆ ತೆರಿಗೆ ಅನ್ವಯವಾಗುವುದಿಲ್ಲ.

5. ರಜೆ ಪ್ರಯಾಣ ಭತ್ಯೆ
ರಜೆ ಪ್ರಯಾಣ ಭತ್ಯೆ ಎನ್ನುವುದು ಉದ್ಯೋಗದಾತ ಸಂಸ್ಥೆ ತನ್ನ ನೌಕರರಿಗೆ ನೀಡುವ ಒಂದು ವಿಧದ ಸಂಭಾವನೆಯಾಗಿದೆ. ತೆರಿಗೆ ಇಲಾಖೆಯ ಸೆಕ್ಷನ್ 10 (5)ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ.

6. ಭವಿಷ್ಯ ನಿಧಿ(ಪಿಎಫ್)
ಮಾಸಿಕ ಆಧಾರದಲ್ಲಿ ನಿಮ್ಮ ಮೂಲ ವೇತನದಿಂದ ಶೇ. 12ರಷ್ಟು ಪ್ರಾವಿಡೆಂಟ್ ಫಂಡ್ ನಿಮ್ಮ ಇಪಿಎಫ್ ಖಾತೆಗೆ ಜಮಾ ಆಗುತ್ತದೆ. ಇದೇ ಪ್ರಮಾಣದ ಮೊತ್ತ ನಿಮ್ಮ ಉದ್ಯೋಗದಾತರಿಂದ ನಿಮ್ಮ ಖಾತೆಗೆ ಬರುತ್ತದೆ.

7. ವೃತ್ತಿಪರ ತೆರಿಗೆ
ವೃತ್ತಿಪರ ತೆರಿಗೆ ಎನ್ನುವುದು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಒಂದು ವಿಧದ ತೆರಿಗೆ. ರಾಜ್ಯದ ಉದ್ಯೋಗದಾತ ಸಂಸ್ಥೆ ಸಂಬಳದಿಂದ ವೃತ್ತಿಪರ ತೆರಿಗೆ ಕಡಿತಗೊಳಿಸುವ ಜವಾಬ್ದಾರಿ ಹೊಂದಿರುತ್ತದೆ. ವೃತ್ತಿಪರ ತೆರಿಗೆ ವ್ಯಕ್ತಿಗಳ ಆದಾಯ ಅವಲಂಬಿಸಿ ಬದಲಾಗುತ್ತದೆ.

8. ಟಿಡಿಎಸ್
ನಿಮ್ಮ ಆದಾಯಕ್ಕೆ ಅನುಗುಣವಾಗಿ ಟಿಡಿಎಸ್ ರೂಪದಲ್ಲಿ ಪ್ರತಿ ತಿಂಗಳು ನಿಮ್ಮ ಸಂಬಳದಿಂದ ನಿರ್ಧಿಷ್ಟ ಮೊತ್ತವನ್ನು ಸಂಸ್ಥೆ ಕಡಿತಗೊಳಿಸುತ್ತದೆ. ಕಡಿತಗೊಳಿಸಿದ ಈ ಮೊತ್ತವನ್ನು ತೆರಿಗೆ ಇಲಾಖೆಗೆ ಪಾವತಿಸಲಾಗುತ್ತದೆ.

Comments

Popular Posts